ಜಲಭೂವಿಜ್ಞಾನ -
	ಅಂತರ್ಜಲದ ಆಕರಗಳು, ಹಂಚಿಕೆ, ಚಲನೆ ಮತ್ತು ಗುಣಗಳ ಬಗೆಗಿನ ಅಧ್ಯಯನ (ಹೈಡ್ರಾಲಜಿ). ಅಂತರ್ಜಲ ಮತ್ತು ಮೇಲ್ಮೈ ಜಲಗಳು ಚಿಲುಮೆ, ನದಿ, ಸರೋವರ ಮತ್ತು ಸಾಗರಗಳ ಮೂಲಕ ಸೌರಶಕ್ತಿಯ ಸಹಾಯದಿಂದ ಉಂಟಾಗುವ ಬಾಷ್ಪೀಭವನ ಮತ್ತು ಸಸ್ಯಗಳ ಬಾಷ್ಪವಿಸರ್ಜನೆಯಿಂದ ಆವಿಯ ರೂಪದಲ್ಲಿ ಆಕಾಶ ಸೇರುತ್ತವೆ. ಅಲ್ಲಿ ಮೋಡಗಳಾಗಿ ಮಳೆಗರೆದಾಗ ಈ ನೀರು ಪುನಃ ಭೂಮಿಯನ್ನು ತಲುಪುವುದು. ಹೀಗೆ ಜಲ ಭೂಮಿ-ಆಕಾಶ ನಡುವೆ ಸದಾ ಚಕ್ರೀಯವಾಗಿ ಸುತ್ತುತ್ತ ಇರುವುದು. ಇದಕ್ಕೆ ಜಲಚಕ್ರ ಎಂದು ಹೆಸರು. ಇದನ್ನು ಮುಖ್ಯವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಬಹುದು. : ಪ್ರಕ್ಷೇಪನ, ಬಾಷ್ಪೀಭವನ ಹಾಗೂ ಸಸ್ಯಗಳ ಬಾಷ್ಪ ವಿಸರ್ಜನ, ಜಲಪ್ರವಹನ, ಅಂತರ್ಜಲ ಸಂಗ್ರಹ. ಭೂಮಿಯ ಬೇರೆ ಬೇರೆ ಪ್ರದೇಶಗಳ ಅಂತರ್ಜಲ ಸಂಚಯನದ ಅಂದಾಜು ಮಾಡಲು ಮತ್ತು ಬಳಕೆಗೆ ಸೂಕ್ತ ನಿವೇಶಗಳನ್ನು ಅರಿಯಲು ಜಲಚಕ್ರದ ಎಲ್ಲ ಹಂತಗಳ ವಿವರವನ್ನೂ ಆ ಪ್ರದೇಶದ ಶಿಲಾಸ್ತೋಮಗಳ ಜಲಧಾರಣ ಯೋಗ್ಯತೆ ಹಾಗೂ ಸ್ವರೂಪವನ್ನೂ ಅರಿಯಬೇಕು. ಇದರ ನೈಜ ಅರಿವು 17ನೆಯ ಶತಮಾನದ ಕೊನೆಯ ಹೊತ್ತಿಗೆ ಮೂಡಲಾರಂಭಿಸಿತು. ಆಗ ಮೊದಲ ಬಾರಿಗೆ ಪ್ರತ್ಯಕ್ಷ ಅವಲೋಕನವನ್ನು ಅವಲಂಬಿಸಿದ ಸಿದ್ಧಾಂತಗಳು ಮತ್ತು ಪ್ರಮಾಣಭೂತ ವಿವರಣೆಗಳ ಆಧಾರಗಳು ಸಂಗ್ರಹಿತವಾದುವು. ಪಿರೆ ಪಿಲಾಲ್ಟನು (1608-80) ಮೂರು ವರ್ಷಗಳ ಮಳೆಯ ಪ್ರಮಾಣವನ್ನು ಅಳೆದು ಆ ಪ್ರದೇಶದ ಪ್ರವಹನಕ್ಕೆ ಹೋಲಿಸಿದಾಗ ಅವನಿಗೆ ಪ್ರಕ್ಷೇಪನಗೊಂಡಿರುವ ಜಲದ ಆರನೆಯ ಒಂದು ಭಾಗ ಮಾತ್ರ ಭೂಮಿಯ ಮೇಲೆ ಪ್ರವಹಿಸುತ್ತದೆ. ಎಂದು ತಿಳಿಯಿತು. 18ನೆಯ ಶತಮಾನದ ಪ್ರಥಮಾರ್ಧದಲ್ಲಿ ಆರ್ಟೀಸಿಯನ್ ಬಾವಿಗಳನ್ನು (ಬುಗ್ಗೆಯ ಬಾವಿಗಳೂ) ಕೊರೆದು ಪರಿಶೀಲಿಸಲಾಯಿತು. ಫ್ರಾನ್ಸಿನ ಜಲಚಲನ ಶಾಸ್ತ್ರಜ್ಞ ಹೆನ್ರಿ ಡಾರ್ಸಿ ಮರಳಿನ ಮೂಲಕ ಜಲದ ಚಲನೆಯ ಬಗ್ಗೆ ಅಧ್ಯಯನ ನಡೆಸಿ ಡಾರ್ಸಿಯ ನಿಯಮ ಎಂಬ ಒಂದು ಅಂತರ್ಜಲ ಚಲನೆಯನ್ನು ವಿವರಿಸುವ ನಿಯಮವನ್ನೇ ನೀಡಿದ.

	ಜಲಚಕ್ರ : ವೈಜ್ಞಾನಿಕ ಅಂದಾಜಿನ ಪ್ರಕಾರ ಪ್ರತಿವರ್ಷವೂ ಭೂಗೋಳದ 36 ಮಿಲಿಯನ್ ಎಕರೆ ನೆಲದ ಮೇಲೆ ಸುಮಾರು 24,000 ಘನ ಮೈಲಿಗಳಷ್ಟು ಮಳೆ ಸುರಿಯುತ್ತದೆ. ಈ ಭಾರೀ ಪ್ರಮಾಣದ ನೀರು ಮೇಲೆ ಹೇಳಿದಂತೆ ವಿವಿಧ ಹಂತಗಳ ಮೂಲಕ ಹಾಯುತ್ತಿರುತ್ತದೆ. ಯಾವುದೇ ಹಂತದಲ್ಲಿ ಅದರ ಪ್ರಮಾಣವನ್ನು ಅರಿಯಲು ಇತರ ಹಂತಗಳ ವಿವರವನ್ನು ಚೆನ್ನಾಗಿ ಅರಿಬೇಕು.

	ಜಲಪ್ರಕ್ಷೇಪನ : ಬೀಸುವ ಗಾಳಿಯಲ್ಲಿ ಉಂಟಾಗುವ ಒತ್ತಡ ಹಾಗೂ ಉಷ್ಣತೆಯ ಬದಲಾವಣೆಗಳು ಗಾಳಿಯನ್ನು ತೇವಭರಿತವಾಗಿಸುತ್ತವೆ. ಗಾಳಿಯಲ್ಲಿ ತೇಲುವ ಸಣ್ಣ ಸಣ್ಣ ದೂಳಿನ ಕಣಗಳ, ಹೂವಿನ ಪರಾಗ ರೇಕುಗಳ ಮತ್ತು ಸಮುದ್ರದಿಂದ ಆವಿಯಾಗಿ ಮೇಲೆರುತ್ತ ಉಂಟಾದ ಉಪ್ಪಿನ ಸೂಕ್ಷ್ಮಕಣಗಳ ಸುತ್ತಲೂ ಈ ತೇವಾಂಶ ಆವರಿಸಿ ಮೋಡಗಳು ಮೈದಳೆಯುತ್ತವೆ. ತೇವಾಂಶ 0.04 mm ವ್ಯಾಸದ ಹನಿಗಳಾಗಿ ಮಾರ್ಪಾಡಾದಾಗ ಈ ಸೂಕ್ಷ್ಮತುಂತುರು ಭೂಮಿಯೆಡೆಗೆ ಸಾಗುವ ವೇಗ ಅತಿ ಕಡಿಮೆ. ಇವುಗಳ ಗುಂಪೇ ಮೋಡ. ಮೋಡಗಳ ಸ್ಥಿರತೆ ಗಾಳಿಯಲ್ಲಿನ ಉಷ್ಣತೆ, ಮೋಡಗಳ ಬೇರೆ ಬೇರೆ ಭಾಗಗಳ ಸಾಪೇಕ್ಷ ಚಲನೆ ಮತ್ತು ಹನಿ ಅಂಕುರಿಸಲು ಕಾರಣೀಭೂತವಾದ ಬೀಜಾಣುಗಳನ್ನು ಅವಲಂಬಿಸಿದೆ. ಮೋಡಗಳಲ್ಲಿ ಘನೀಭವನ ಉಷ್ಣತೆಗೂ ಕಡಿಮೆ ಉಷ್ಣತೆಯ ನೀರು ಇರುವುದು. ತೇವಾಂಶಭರಿತ ಗಾಳಿ ಮೇಲೇರಿದಂತೆ ಅದರ ಒತ್ತಡ ಕಡಿಮೆಯಾಗಿ ಉಷ್ಣತೆ ಮತ್ತೂ ಕಡಿಮೆಯಾಗುತ್ತದೆ. ಗಾಳಿಯಲ್ಲಿನ ಸಾಪೇಕ್ಷ ತೇವಾಂಶ ಕ್ರಮೇಣ ಹೆಚ್ಚಿ ದ್ರವರೂಪದಲ್ಲಿರುವ ನೀರಿನ ಸೇಕಡ 100ರಷ್ಟು ಹೆಚ್ಚುತ್ತದೆ. ಆ ಸ್ಥಿತಿಯಲ್ಲಿ ಉಷ್ಣತೆ-10 ಅ-20 ಅ ವರೆಗಿದ್ದು ಬರ್ಫದ ಸ್ಫಟಿಕಗಳು ಹುಟ್ಟಿಕೊಳ್ಳುತ್ತವೆ. ಈ ಎರಡು ಉಷ್ಣತೆಗಳ ನಡುವೆ ನೀರಿನ ತುಂತುರು ಮತ್ತು ಬರ್ಫದ ಸ್ಫಟಿಕಗಳು ಒಟ್ಟಿಗೆ ಇದ್ದು ಬರ್ಫದ ಮೇಲಿನ ಸಂತೃಪ್ತ ಬಾಷ್ಪ ಒತ್ತಡ ನೀರಿನ ಮೇಲಿನದಕ್ಕಿಂತ ಕಡಿಮೆ ಇರುತ್ತದೆ. ಉಷ್ಣತೆ-11.5 ಅ ತಲುಪಿದಾಗ ಈ ಒತ್ತಡದ ವ್ಯತ್ಯಾಸ ಗರಿಷ್ಠ ಆಗುತ್ತದೆ. ಆಗ ಬರ್ಫದ ಮೇಲೆ ತೇವದ ಆವರಣ ಬಹುಬೇಗ ಹೆಚ್ಚಿ ಅವುಗಳ ಬೆಳವಣಿಗೆ ಶೀಘ್ರಗೊಳ್ಳುತ್ತದೆ. ಬೀಜಾಣುವಿನ ಸುತ್ತಲೂ ಉಂಟಾದ ತೇವಾವರಣ ಅದರ ಸುತ್ತಲಿನ ಗಾಳಿಯ ತೇವವನ್ನು ಕಡಿಮೆಗೊಳಿಸಿ ಕ್ರಮೇಣ ಅದರ ತೇವಾಂಶ ಸಂತೃಪ್ತತೆಯನ್ನು ಇಲ್ಲವಾಗಿಸುತ್ತದೆ. ಆಗ ಗಾಳಿಯಲ್ಲಿ ಇನ್ನೂ ಉಳಿದಿರಬಹುದಾದ ನೀರಿನ ತುಂತುರುಗಳೆಲ್ಲವೂ ಬಾಷ್ಪೀಭವಿಸಿ ಬರ್ಫದ ಸ್ಫಟಿಕಗಳ ಮೇಲೆ ಕೂರುವುವು. ಇದರಿಂದಾಗಿ ಸ್ಫಟಿಕಗಳು ಮತ್ತಷ್ಟು ಗಾತ್ರಗೊಂಡು ತಮ್ಮ ಭಾರಕ್ಕೆ ಉದುರಲಾರಂಭಿಸುತ್ತವೆ. ಆಗ ಕೆಳವಾತಾವರಣದ ಗಾಳಿಯಲ್ಲಿನ ಉಷ್ಣತೆಯಿಂದಾಗಿ ಬರ್ಫ ಕರಗಿ ನೀರಾಗಿ ನೆಲಕ್ಕೆ ಬೀಳುತ್ತದೆ. ಇದೇ ಮಳೆ ಅಥವಾ ಜಲಪ್ರಕ್ಷೇಪನ.

   ಬಾಷ್ಫೀಭವನ ಮತ್ತು ಸಸ್ಯಗಳ ಬಾಷ್ಫ ವಿಸರ್ಜನೆ : ಸೌರಶಕ್ತಿಗೆ ಹೊರಸೂಸಲ್ಪಟ್ಟ ಜಲ ಅನಿಲರೂಪಕ್ಕೆ ತಿರುಗುವ ಕ್ರಿಯೆ ಬಾಷ್ಪೀಭವನ. ಸಸ್ಯಗಳು ಉಪಯೋಗಿಸಿದ ತರುವಾಯ ಹೊರಬಿಡಲ್ಪಟ್ಟ ನೀರು ಬಾಷ್ಪೀಭವಿಸಿದಾಗ ಅದು ಬಾಷ್ಪ ವಿಸರ್ಜನೆ ಎನ್ನಿಸಿಕೊಳ್ಳುತ್ತದೆ. ಬಾಷ್ಪೀಭವನ ಮತ್ತು ವಿಸರ್ಜನೆಗಳಿಗೆ ಮುಖ್ಯ ಕಾರಣಗಳು ಸೌರ ಉಷ್ಣ, ಗಾಳಿಯ ಬೀಸುವಿಕೆ, ನೀರಿನ ಉಷ್ಣತೆ, ಗಾಳಿಯ ತೇವಾಂಶ, ತೇವಾಂಶದ ಒತ್ತಡ, ಪ್ರದೇಶದ ಔನ್ನತ್ಯ ಮತ್ತು ನೀರಿನ ರಾಸಾಯನಿಕ ಗುಣಗಳು, ಇವೆಲ್ಲವೂ ಪ್ರತಿಯೊಂದು ಕ್ರಿಯೆಯ ಮೇಲೆಯೂ ತಮ್ಮದೇ ಆದ ಪರಿಣಾಮಗಳನ್ನು ಬೀರುತ್ತವೆ. ಕೆಲವೊಮ್ಮೆ ಅವು ಒಂದನ್ನೊಂದು ಅವಲಂಬಿಸಿಕೊಂಡಿರುವುದುಂಟು. ನೀರಿನ ಮೇಲ್ಮೈ ಹಾಗೂ ಸುತ್ತಲಿನ ವಾತಾವರಣ ಸೌರಶಕ್ತಿಯನ್ನು ಹೀರಿಕೊಂಡಾಗ ಅವುಗಳ ಉಷ್ಣತೆ ಏರುತ್ತದೆ; ಮತ್ತು ಉಷ್ಣದ ಸ್ವಲ್ಪ ಭಾಗ ಮೇಲಿನ ಗಾಳಿಗೆ ಏರುತ್ತದೆ. ಹಾಗೆಯೇ ನೀರಿನ ಆಳಕ್ಕೂ ಇಳಿಯುತ್ತದೆ. ಮೇಲಿನ ಗಾಳಿಗೆ ಏರುವ ಉಷ್ಣದೊಡನೆ ನೀರಿನ ಮೇಲ್ಭಾಗದ ಅಣುಗಳು ಎಲೆಗಳ ವೈಶಾಲ್ಯವನ್ನು ಅವಲಂಬಿಸಿದೆ. ಈ ಎಲ್ಲಕ್ಕೂ ಮತ್ತೊಮ್ಮೆ ಆಯಾ ಪ್ರದೇಶದ ಹವಾಗುಣವೇ ಮುಖ್ಯಾಂಶ.

   ಜಲ ಪ್ರವಹನ : ನೆಲದ ಮೇಲೆ ಹರಿದು ಸಾಗರದತ್ತ ಸಾಗುವ ನೀರು ಜಲ ಚಕ್ರದ ಎಲ್ಲ ಭಾಗಗಳಿಗೂ ಹಂಚಿ ಉಳಿದ ನೀರಿನ ಭಾಗ ಎನ್ನಬಹುದು. ಈ ಹಂತದ ನೀರು ಮಾನವನ ಉಪಯೋಗಕ್ಕೆ ನೇರವಾಗಿ ದೊರಕಬಲ್ಲುದು. ಆದರೆ ಅದರ ಹಂಚಿಕೆ ಬೇರೆ ಬೇರೆ ಪ್ರದೇಶಗಳಲ್ಲಿ ಅನಿರ್ದಿಷ್ಟವಾದ್ದರಿಂದ ಅದು ದೊರೆಯಬಹುದಾದ ಪ್ರಮಾಣ ಅನಿಶ್ಚಿತ ಮತ್ತು ಈ ನೀರಿನ ಗುಣ ಅದು ಹರಿಯುತ್ತಿರುವ ಪರಿಸರಕ್ಕೆ ತಕ್ಕಂತಿರುತ್ತದೆ. ಹೊನಲುಗಳಲ್ಲಿ ಕೆಲವಕ್ಕೆ ಅಂತರ್ಜಲದ ಆಧಾರ ಇರಬಹುದು. ಕೆಲವು ಅಂತರ್ಜಲದ ಹೆಚ್ಚಳಕ್ಕೆ ಕಾರಣವಾಗುವುದೂ ಉಂಟು. ಇವುಗಳ ಹರಿಯುವಿಕೆಯನ್ನು ನಿಯತ ಸ್ಥಳಗಳಲ್ಲಿ ಹೊನಲುಮಾನಗಳಿಂದ ಅಳೆದು ಆಯಾ ಪ್ರದೇಶದ ಅಂತರ್ಜಲ ಪಾತ್ರಗಳಲ್ಲಿರುವ ಅಂತರ್ಜಲ ಪ್ರಮಾಣವನ್ನು ಅರಿಯಲು ಅನುಸರಿಸುವ ಸಮೀಕರಣಕ್ಕೆ ಅಳವಡಿಸಿಕೊಳ್ಳಬಹುದು.

   ಅಂತರ್ಜಲ ಸಂಗ್ರಹ : ಆಕಾಶದಿಂದ ಪ್ರಕ್ಷೇಪಗೊಂಡ ಜಲ, ಹಿಮ ಅಥವಾ ಆಲಿಕಲ್ಲು ಹೊನಲುಗಳಲ್ಲಿ ಪ್ರವಹಿಸುತ್ತ ಆಯಾ ಪ್ರದೇಶದ ಶಿಲಾಕಣಗಳಿಗೆ ಅನುಗುಣವಾಗಿ ನೆಲದೊಳಕ್ಕೆ ಜಿನುಗುತ್ತ ಅಂತರ್ಜಲ ಹಂತವನ್ನು ಪ್ರವೇಶಿಸುತ್ತದೆ. ಭೂಮಿಯ ಹೊರಪದರದ ಶಿಲೆಗಳ ತೆರಪುಗಳ ಮಧ್ಯೆ ಜಿನುಗುವ ಈ ಜಲವನ್ನು ಭೂಜಲವೆಂದು ಕರೆಯಬಹುದು. ಇಂಥ ಜಲ ಜಿನುಗುವ ವಲಯಗಳನ್ನು ಅವುಗಳ ಸ್ಥಾನಕ್ಕೆ ತಕ್ಕಂತೆ ವಾಯುಭರಿತವಲಯ ಮತ್ತು ಸಂತೃಪ್ತವಲಯವೆಂದು ವಿಂಗಡಿಸಬಹುದು. ವಾಯುಭರಿತ ವಲಯ ನೆಲಮಟ್ಟದಿಂದ ಅಂತರ್ಜಲ ಮಟ್ಟದ ವರೆಗೂ ವಿಸ್ತರಿಸಿಕೊಂಡಿದ್ದು ಈ ಮಟ್ಟದ ಕೆಳಗಿನ ವಲಯವೇ ಸಂತೃಪ್ತವಲಯ. ಇಲ್ಲಿ ಶೇಖರಣಗೊಳ್ಳುವ ಜಲವೇ ಅಂತರ್ಜಲ. ವಾಯುಭರಿತ ವಲಯದ ತೆರಪುಗಳಲ್ಲಿ ಜಲದ ಜೊತೆಗೆ ಅಲ್ಲಲ್ಲಿಯೇ ವಾಯುವೂ ತುಂಬಿಕೊಂಡಿರುತ್ತವೆ. ಈ ವಲಯದ ಮೇಲುಹಂತದಲ್ಲಿ ಸಸ್ಯಗಳು ತಮ್ಮ ಬೆಳವಣಿಗೆ ಬೇಕಾದ ನೀರನ್ನು ಹೀರಿಕೊಳ್ಳಲೋಸ್ಕರ ತಮ್ಮ ಬೇರುಗಳನ್ನು ಹರಡಿಕೊಂಡಿರುತ್ತವೆ. ಈ ಹಂತದ ವೈಶಾಲ್ಯ ಆಯಾ ಪ್ರದೇಶದ ಮಣ್ಣು ಮತ್ತು ಸಸ್ಯವರ್ಗಕ್ಕೆ ತಕ್ಕಂತೆ ಇರುವುದು. ಇದಕ್ಕೆ ಮಣ್ಣುಮಿಶ್ರಿತ ಜಲಹಂತವೆಂದು ಹೆಸರು. ಇದು ಹುಲ್ಲುಗಾವಲುಗಳ ಪ್ರದೇಶಗಳಲ್ಲಿ ಕೇವಲ ಕೆಲವಾರು ಅಡಿಗಳ ವರೆಗೆ ಮಾತ್ರ ಇದ್ದು ಅರಣ್ಯ ಪ್ರದೇಶಗಳಲ್ಲಿ ಬಹಳ ಆಳದವರೆಗೂ ಇರುತ್ತದೆ. ವಾಯುಭೂರಿತ ವಲಯದ ಕೆಳಭಾಗದಲ್ಲಿ ಸಂತೃಪ್ತ ವಲಯದ ನೀರು ಮೇಲಕ್ಕೇರಿರುವುದು. ಇದು ಲೋಮನಾಳಾಕರ್ಷಣ ಹಂತಗಳ ಮಧ್ಯೆ ಇರುವ ಭಾಗದಲ್ಲಿ ನೀರು ಗುರುತ್ವದಿಂದ ಕೆಳಕ್ಕಿಳಿಯುತ್ತಿರುತ್ತದೆ. ಈ ಹಂತಕ್ಕೆ ಮಧ್ಯಮ ಹಂತ ಎಂದು ಹೆಸರು. ಮಳೆಯ ನೀರು ನೆಲಮಟ್ಟದ ಮಣ್ಣಿನಲ್ಲಿ ಮಿಶ್ರವಾಗಿ ಗುರುತ್ವದಿಂದ ಕೆಳಕ್ಕಿಳಿಯುತ್ತಿರುತ್ತದೆ. ಈ ಹಂತಕ್ಕೆ ಮಧ್ಯಮ ಹಂತ ಎಂದು ಹೆಸರು. ಮಳೆಯ ನೀರು ನೆಲಮಟ್ಟದ ಮಣ್ಣಿನಲ್ಲಿ ಮಿಶ್ರವಾಗಿ ಗುರುತ್ವದಿಂದ ಕೆಳಕ್ಕೆ ಜಿನುಗುತ್ತ ಲೋಮನಾಳಾಕರ್ಷಣ ಹಂತದ ಮೂಲಕ ಸಂತೃಪ್ತ ವಲಯವನ್ನು ಸೇರುವುದು. ಸಂತೃಪ್ತ ವಲಯದ ನಿಶ್ಚಲ ದ್ರವದ ಒತ್ತಡ ವಾತಾವರಣದ ಒತ್ತಡಕ್ಕೆ ಸಮ ಅಥವಾ ಹೆಚ್ಚು ಇರುತ್ತದೆ. ಈ ಎರಡು ಮಟ್ಟಗಳನ್ನು ಬೇರ್ಪಡಿಸುವ ಮಟ್ಟವೇ ಅಂತರ್ಜಲ ಮಟ್ಟ.

   ಅಂತರ್ಜಲದ ಆಕರಗಳು : ಅಂತರ್ಜಲ ಸಂಚಯನದ ಯಥೇಚ್ಛತೆ ಆಯಾ ಪ್ರದೇಶದ ಶಿಲಾಸ್ತೋಮಗಳ ಜಲಧಾರಣ ಯೋಗ್ಯತೆಯನ್ನು ಅವಲಂಬಿಸಿದೆ. ಭೂವಿಜ್ಞಾನಿಗಳು ಅಧ್ಯಯನದ ಅನುಕೂಲಕ್ಕಾಗಿ ಅಸಂಘಟಿತ ಮಣ್ಣು, ಜೇಡು ಮರಳು ಹಾಗೂ ಸುಸಂಘಟಿತ ಗ್ರಾನೈಟ್, ಕ್ವಾರ್ಟ್‍ಸೈಟ್ ಇತ್ಯಾದಿಗಳನ್ನೂ ಶಿಲೆಗಳೆಂದೇ ಕರೆಯುತ್ತಾರೆ. ಈ ಕೆಲವು ಶಿಲೆಗಳಲ್ಲಿ ಸಾಕಷ್ಟು ರಂಧ್ರಗಳಿದ್ದು ಅವು ಒಂದನ್ನೊಂದು ಸಢರಿಕೊಂಡು ಸ್ರಾವ್ಯಶೀಲತೆಯನ್ನು ಪಡೆದುಕೊಂಡಿರುತ್ತವೆ. ಮತ್ತೆ ಕೆಲವು ಶಿಲೆಗಳಲ್ಲಿ ಬಿರುಕುಗಳು, ಸೀಳು ಹಾಗು ಗವಿಯಂಥ ಕೊರಕಲುಗಳು ಇದ್ದು ಅಂತರ್ಜಲದ ಚಲನೆ ಮತ್ತು ಶೇಖರಣೆಗೆ ಸ್ಥಳಾವಕಾಶ ಮಾಡಿಕೊಡುತ್ತವೆ. ಸರಂಧ್ರ ಮತ್ತು ಸ್ರಾವ್ಯಶೀಲ ಶಿಲೆಗಳನ್ನು ಜಲಧರಿತ ಶಿಲೆಗಳೆಂದೂ ಕರೆಯಬಹುದು. ಏಕೆಂದರೆ ಈ ಶಿಲೆಗಳು ನೀರನ್ನು ತಮ್ಮಲ್ಲಿರುವ ರಂಧ್ರಗಳ ಹಿಡಿದಿಟ್ಟುಕೊಳ್ಳಬಲ್ಲವೇ ವಿನಾ ಅದರ ಚಲನೆಗೆ ಅವಕಾಶವಿಲ್ಲದೇ ಇದ್ದು ಜಲವ್ಯಾಪ್ಯವಾಗಲಾರವು. ಕೆಲವು ಶಿಲೆಗಳಲ್ಲಿ ಸರಂಧ್ರತೆ ಮತ್ತು ಸ್ರಾವ್ಯಶೀಳತೆ ಎರಡೂ ಇಲ್ಲದಿದ್ದು ಜಲರಹಿತ ಶಿಲೆಗಳೆನಿಸಿಕೊಳ್ಳುತ್ತವೆ. ಜಲಗ್ರಾಹಿ ಮತ್ತು ಜಲಭರಿತ ಶಿಲೆಗಳಿರುವ ಭೂಭಾಗಗಳು ಅಂತರ್ಜಲಾಶಯಗಳಾಗಲು ಯೋಗ್ಯ.

   ಭೂಮಿಯ ಎಲ್ಲ ಶಿಲೆಗಳನ್ನೂ ಅವುಗಳ ಉಗಮಕ್ಕೆ ತಕ್ಕಂತೆ ಮೂರು ವಿಧಗಳನ್ನಾಗಿ ವಿಂಗಡಿಸಬಹುದು. ಅವೇ ಅಗ್ನಿಶಿಲೆ ಅವಸಾದನ (ಜಲಜ) ಶಿಲೆ ಮತ್ತು ರೂಪಾಂತರ ಶಿಲೆ. ಅಗ್ನಿ ಶಿಲೆಗಳು ನಿರ್ಮಾಣಗೊಳ್ಳುವಾಗ ಬಿಸಿದ್ರವ ರೂಪದ ಮ್ಯಾಗ್ಮಾ ತಣ್ಣಗಾಗುತ್ತ ಆಳದಲ್ಲಿ ಘನೀಭವಿಸಿದ್ದಲ್ಲಿ ಅದಕ್ಕೆ ಅಂತಸ್ಸರಣ ಶಿಲೆಯೆಂದೂ ಭೂಗರ್ಭದಿಂದ ಹೊರನುಗ್ಗುತ್ತ ತಣ್ಣಗಾದರೆ ಅದಕ್ಕೆ ಬಹಿಸ್ಸರಣ ಶಿಲೆಯೆಂದೂ ಹೆಸರು. ಬಹಿಸ್ಸರಣ ಶಿಲೆಗಳಲ್ಲಿ ಖನಿಜಗಳು ಬಹು ಸೂಕ್ಷ್ಮವಾಗಿ ಸ್ಫಟಿಕೀಕರಣಗೊಂಡು ಒಡನಿದ್ದ ಅನಿಲಗಳು ಬಿಡುಗಡೆ ಹೊಂದುವಾಗ ಅಲ್ಲಲ್ಲಿ ಕುಳಿಗಳನ್ನು ಉಂಟು ಮಾಡಿರುತ್ತವೆ. ಹೀಗೆ ಉಂಟಾದ ಬೆಸಾಲ್ಟ್ ಶಿಲೆಗಳಲ್ಲಿ ಈ ಕುಳಿಗಳೇ ಅಂತರ್ಜಲದ ಚಲನೆಗೆ ಅವಕಾಶ ನೀಡುತ್ತವೆ; ಮತ್ತು ಈ ಶಿಲೆ ನಿರ್ಮಾಣಗೊಳ್ಳುವಾಗ ಉಂಟಾಗುವ ಪಂಚಭುಜಾಕೃತಿಯ ಬಿರುಕುಗಳು ಹಾದಿಯಂತೆ ವರ್ತಿಸುತ್ತವೆ. ಇರೆ ಶಿಲೆಗಳ ಶಿಥಿಲೀಕರಣದಿಂದ ಉಂಟಾದ ಕಣಗಳು ನದಿಗಳಿಂದ ಸಾಗಿಸಲ್ಪಟ್ಟು ಸಾಗರ ಸರೋವರ ಪಾತ್ರಗಳಲ್ಲಿ ಅಥವಾ ಗಾಲಿಯಿಂದ ಸಾಗಿಸಲ್ಪಟ್ಟು ಬಯಲುಗಳಲ್ಲಿ ಸಂಚಯನಗೊಂಡು ಅವಸಾದನ ಶಿಲೆಗಳು ನಿರ್ಮಾಣವಾಗುತ್ತವೆ. ಈ ಶಿಲೆಗಳು ಹೆಚ್ಚಾಗಿ ಸರೋವರ ಸಾಗರಪಾತ್ರಗಳಲ್ಲಿ ಸಂಚಿತವಾಗುವುದರಿಂದ ಇವಕ್ಕೆ ಜಲಜ ಶಿಲೆಗಳೆಂದೂ ಹೆಸರುಂಟು. ಇವು ವಿಶೇಷವಾಗಿ ಸರಂಧ್ರವಾಗಿರುವುದರಿಂದ ಒಳ್ಳೆಯ ಅಂತರ್ಜಲಕರಗಳಾಗಿರಬಲ್ಲವು. ಭೂಮಿಯ ಹೊರಪದರಗಳಲ್ಲಿ ಅವಸಾದನ ಶಿಲೆಗಳು ಕೇವಲ 5% ರಷ್ಟಿದ್ದರೂ ಇವು ಅಂತರ್ಜಲದ 95% ಭಾಗವನ್ನು ಅಳವಡಿಸಿಕೊಂಡಿರುತ್ತದೆ. ಭೂಮಿಯ ಅಸಾಧಾರಣ ಉಷ್ಣ ಮತ್ತು ಒತ್ತಡಗಳಿಗೊಳಗಾದಾಗ ಶಿಲೆಗಳು ತಮ್ಮ ಸ್ವರೂಪ ಹಾಗೂ ಖನಿಜ ಸಂಯೋಜನೆಯಲ್ಲಿ ವ್ಯತ್ಯಾಸಗೊಂಡು ರೂಪಾಂತರಗೊಳ್ಳುತ್ತವೆ. ಇವೇ ರೂಪಾಂತರ ಶಿಲೆಗಳು. ಸಾಮಾನ್ಯವಾಗಿ ಈ ಶಿಲೆಗಳು ಜಲಭರಿತ ಶಿಲೆಗಳಾಗಲು ಯೋಗ್ಯವಲ್ಲ. ಆದರೂ ಅವುಗಳಲ್ಲಿ ಉಂಟಾಗುವ ಬಿರುಕು ಮತ್ತು ಸೀಳುಗಳು ಅಂತರ್ಜಲದ ಚಲನೆಗೆ ಎಡೆಮಾಡಿಕೊಡುತ್ತವೆ. ಅಮೃತಶಿಲೆಯಂಥ ರಾಸಾಯನಿಕ ಶಿಥಿಲೀಕರಣಕ್ಕೆ ಬಹುವಾಗಿ ಒಳಗೊಳ್ಳುವ ಶಿಲೆಗಳಾದರೆ ಅವುಗಳ ಬಿರುಕಿನಲ್ಲಿ ನುಗ್ಗಿದ ನೀರು ಶಿಲೆಯನ್ನು ಕರಗಿಸಿ ದೊಡ್ಡ ದೊಡ್ಡ ಗವಿಯಂಥ ಕೊರಕಲುಗಳನ್ನು ಉಂಟುಮಾಡುವುವು. ಕೆಲವೊಮ್ಮೆ ಹೀಗೆ ಕರಗಿ ಉಂಟಾದ ದ್ರಾವಣಗಳು ಅಲ್ಲಲ್ಲಿಯೇ ತೊಂಗಲುಗಳನ್ನುಂಟು ಮಾಡಿ ನಯನ ಮನೋಹರ ದೃಶ್ಯವನ್ನು ನೀಡುವುದುಂಟು. ಶಿಲೆಗಳಲ್ಲಿ ಅಲ್ಲಲ್ಲೇ ಖನಿಜಗಳಿಂದ ಭರ್ತಿ ಆಗದ ಸ್ಥಳಗಳನ್ನು ನೀರು ಆಕ್ರಮಿಸಲ್ಲುದು. ಈ ಸ್ಥಳಗಳಿಗೆ ತೆರಪು ಅಥವಾ ರಂಧ್ರಗಳೆಂದು ಹೆಸರು. ತೆರಪುಗಳು ಅಂತರ್ಜಲದ ಚಲನೆಗೆ ಕೊಳವೆಗಳಂತೆ ಸಹಕರಿಸುತ್ತವೆ. ಇವುಗಳ ಆಕಾರ ಗಾತ್ರ ಮತ್ತು ಹಂಚಿಕೆಗಳಿಗೆ ತಕ್ಕಂತೆ ಇವುಗಳ ಪ್ರಾಮುಖ್ಯವು ಹೆಚ್ಚುತ್ತದೆ. ಕೆಲವು ತೆರಪುಗಳು ಮತ್ತು ಬಿರುಕುಗಳು ಶಿಲೆಯ ಉಗಮ ಕಾಲದಲ್ಲಿಯೇ ಉಂಟಾಗಿರುತ್ತವೆ. ಇದಕ್ಕೆ ಒಳ್ಳೆಯ ಉದಾಹರಣೆ ಮರಳು ಶಿಲೆ ಮತ್ತು ಬೆಸಾಲ್ಟ್ ಇತ್ಯಾದಿಗಳು. ಮತ್ತೆ ಕೆಲವು ತೆರಪುಗಳು ಶಿಲೆಯ ನಿರ್ಮಾಣದ ಅನಂತರ ಶಿಥಿಲೀಕರಣದಿಂದಾಗಿ ಅಥವಾ ಸ್ತರಪಲ್ಲಟದಿಂದಾಗಿ ಅಥವಾ ದ್ರಾವಗಳಿಂದಾಗುವ ತೆರಪುಗಳು.

	ಅಂತರ್ಜಲ ಪಾತ್ರಗಳು : ಒಂದು ಬೃಹತ್ ಜಲಭರಿತ ಶಿಲಾಸ್ತೋಮವುಳ್ಳ ಅಥವಾ ಹಲವಾರು ಜಲಭರಿತ ಶಿಲಾಸ್ತೋಮಗಳನ್ನು ಒಳಗೊಂಡ ಒಂದು ಭೌಗೋಳಿಕ ಪ್ರದೇಶ ಅಂತರ್ಜಲ ಪಾತ್ರವಾಗುತ್ತವೆ. ಎರಡು ಗಿರಿಶ್ರೇಣಿಗಳ ನಡುವಿನ ಕಣಿವೆ ಪ್ರದೇಶದಲ್ಲಿನ ಹೊನಲಿನ ಓರಣದ ಪಾತ್ರವನ್ನು ಅಂದರೆ ಜಲಾನಯನ ಭೂಮಿಯನ್ನು ಅಂತರ್ಜಲ ಪಾತ್ರ ಬಹುವಾಗಿ ಹೊಂದಿಕೊಂಡಿರುತ್ತದೆ. ಆದ್ದರಿಂದ ಅಲ್ಲಿನ ಅಂತರ್ಜಲದ ಬಗೆಗಿನ ಅಧ್ಯಯನ ಆ ಪ್ರದೇಶದ ಸಂಪೂರ್ಣ ಮಾಹಿತಿಯನ್ನು ಅವಲಂಬಿಸಿದೆ. ಅಂತರ್ಜಲ ಪಾತ್ರವನ್ನು ಒಂದು ದೊಡ್ಡ ಭೂಗತ ಜಲಾಶಯವೆಂದು ಮನಗಂಡು ಆಯಾ ಪ್ರದೇಶದ ರೈತರ ಜಮೀನುಗಳ ಮಧ್ಯೆ ಇರುವ ಅಂತರ್ಜಲ ಸಂಬಂಧವನ್ನು ತಿಳಿಯಬಹುದು. ಪ್ರತಿ ಅಂತರ್ಜಲ ಪಾತ್ರಕ್ಕೂ ವಿಶಿಷ್ಟವಾದ ತುಲನಾತ್ಮಕ ಆರ್ಜನೆ, ಶೇಖರಣೆ ಮತ್ತು ವಿಸರ್ಜನೆ ಇವೆ. ಒಂದು ಪ್ರದೇಶದ ಅಂತರ್ಜಲ ಮೊತ್ತದ ಅಂದಾಜು ಮಾಡಲು
                         I = R- E+S
ಎಂಬ ಅಂತರ್ಜಲ ಸಮೀಕರಣವನ್ನು ಬಳಸಬೇಕು. ಇಲ್ಲಿ I ಅಂತರ್ಜಲ ಹೆಚ್ಚಳ, R ಮಳೆಯ ಒಟ್ಟು ಪ್ರಮಾಣ, E  ಆ ಪ್ರದೇಶದಲ್ಲಿ ಉಂಟಾಗುವ ಬಾಷ್ಪೀಭವನ ಮತ್ತು S ಸಸ್ಯಗಳ ಬಾಷ್ಪವಿಸರ್ಜನೆ.

   ಚಲನೆ: ಭೂಮಿಯೊಳಗೆ ಅಂತರ್ಜಲ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಜಲಶಾಸ್ತ್ರೀಯ ತತ್ತ್ವಗಳ ಅನುಸಾರ ಚಲಿಸುತ್ತಿರುವುದು. ಅಂತರ್ಜಲಾಶಯಗಳನ್ನು ಅವುಗಳ ಸ್ಥಾನಕ್ಕೆ ತಕ್ಕಂತೆ ಅಂತರ್ಜಲ ಮಟ್ಟದ ಅಂತರ್ಜಲಾಶಯಗಳು ಮತ್ತು ಆರ್ಟೀಸಿಯನ್ ಜಲಾಶಯಗಳೆಂದು ವಿಂಗಡಿಸಲಾಗಿದೆ. ಅಂತರ್ಜಲ ಮಟ್ಟದ ಅಂತರ್ಜಲಾಶಯಗಳಲ್ಲಿ ಜಲ ವಾಸ್ತವವಾಗಿ ವಾತಾವರಣದ ಒತ್ತಡವನ್ನು ಪಡೆದಿರುವುದು. ಇದರ ಮೇಲ್ಮಟ್ಟ ಬಾವಿಗಳಲ್ಲಿ ಏರಬಹುದಾದ ಮಹತ್ತಮ ಮಟ್ಟವನ್ನು ಸೂಚಿಸುತ್ತದೆ. ಆರ್ಟೀಸಿಯನ್ ಅಂತರ್ಜಲಾಶಯಗಳಲ್ಲಿ ಜಲ ವಾತಾವರಣದ ಒತ್ತಡಕ್ಕಿಂತ ಬಲು ಹೆಚ್ಚಿನ ಒತ್ತಡಕ್ಕೆ ಒಳಗಾಗಿರುವುದು. ಅದು ಯಾವುದಾದರೂ ಒಂದು ಜಲರಹಿತ ಶಿಲಾವರಣದಿಂದ ಹೇರಲ್ಪಟ್ಟಿರುವುದೇ ಇದಕ್ಕೆ ಕಾರಣ. ಆರ್ಟೀಸಿಯನ್ ಅಂತರ್ಜಲಾಶಯಗಳ ಮೂಲಕ ಏರಬಹುದಾದ ಒಂದು ಊಹ್ಯ ಮಟ್ಟಕ್ಕೆ ಪೀಡನಮಾಪ್ಯ ಮಟ್ಟವೆಂದು ಹೆಸರು. ಈ ಮಟ್ಟ ಒಂದೇ ಜಲಾಶಯದ ಬೇರೆ ಬೇರೆ ಭಾಗಗಳೆಡೆ ನೆಲಮಟ್ಟಕ್ಕೆ ಕೆಳಗೆ ಅಥವಾ ಮೇಲೆ ಇರುವುದು. ಇದು ಮೇಲಿದ್ದಾಗ ಬಾವಿಗಳು ಪ್ರವಾಹೀ ಆರ್ಟೀಸಿಯನುಗಳಾಗುತ್ತವೆ. ಜಲಭರಿತ ಶಿಲಾವರಣದಲ್ಲಿನ ರಂಧ್ರ ಮತ್ತು ತೆರಪುಗಳು ಒಂದಕ್ಕೊಂದು ಹೆಣೆಯಲ್ಪಟ್ಟು ಸಣ್ಣ ಕೊಳವೆಗಳಂತೆ ವರ್ತಿಸುತ್ತವೆ. ಇವುಗಳಲ್ಲಿ ಅರ್ಜಿತ ಪ್ರದೇಶಗಳಿಂದ ವಿಸರ್ಜನ ಪ್ರದೇಶಗಳೆಡೆಗೆ ನೀರಿನ ಚಲನೆ ಬಹು ನಿಧಾನ-ದಿನಕ್ಕೆ ಕೆಲವು ಅಡಿಗಳನ್ನು ಮೀರಲಾರದು. ಆದಕಾರಣ ಈ ರಂಧ್ರ ಮತ್ತು ತೆರಪುಗಳು ಕೇವಲ ನೀರಿನ ಚಲನೆಗೇ ಅಲ್ಲದೆ ಶೇಖರಣೆಗೂ ಅವಕಾಶ ನೀಡುತ್ತವೆ.

   ಜಲಭರಿತ ಶಿಲೆಯಲ್ಲಿ ನೀರು ಸೂಕ್ಷ್ಮ ಕೊಳವೆಯಂಥ ರಂಧ್ರಗಳಲ್ಲಿ ವ್ಯಾಪಿಸುವ ವೇಗಕ್ಕೆ ಆ ಶಿಲೆಯ ವ್ಯಾಪ್ಯಶೀಲತೆ ಎಂದು ಹೆಸರು. ಫ್ರಾನ್ಸಿನ ಹೆನ್ರಿ ಡಾರ್ಸಿ ಎಂಬ ಜಲಶಾಸ್ತ್ರಜ್ಞ ಜಲಭರಿತ ಶಿಲೆಯಲ್ಲಿ ವ್ಯಾಪ್ಯಶೀಲತೆ ನೀರಿನ ಚಲನ ಸಾಮಥ್ರ್ಯವೆಂದೂ ಇದು ಆ ಶಿಲೆಯಲ್ಲಿ ಎರಡು ಕೇಂದ್ರಗಳ ನಡುವೆ ಇರುವ ಒತ್ತಡದ ವ್ಯತ್ಯಾಸ ಮತ್ತು ಅವೆರಡರ  ನಡುವೆ ತೆಳು ಅಥವಾ ಪ್ರಶಾಂತ ಪ್ರವಾಹದ ವೇಗಕ್ಕೆ ತಕ್ಕಂತೆ ಇರುವುದು ಎಂದೂ ಹೇಳಿದ್ದಾನೆ. ಇದನ್ನು ಕೆಳಗಿನ ಸಮೀಕರಣದಿಂದ ವಿವರಿಸಿದ : 
                
ಇಲ್ಲಿ ಗಿ ಒಂದು ದಿನಕ್ಕೆ ಅಡಿಗಳಲ್ಲಿ ಪ್ರವಹನದ ವೇಗ ; h1 ಚಲಿಸಬೇಕಾದ ಶಿಲೆಯಲ್ಲಿ ನೀರು ಪ್ರವೇಶಿಸುವ ಶಿಲಾಛೇದ ಭಾಗದಲ್ಲಿನ ರಂಧ್ರಗಳ ಬಿಂದುವಿನಲ್ಲಿರುವ ಒತ್ತಡ : h2 ಜಲ ನಿರ್ಗಮಿಸುವ ಶಿಲೆಯ ಛೇದ ಭಾಗದಲ್ಲಿನ ರಂಧ್ರಗಳ ಬಿಂದುವಿನಲ್ಲಿ ಒತ್ತಡ ; ಟ ಜಲ ಚಲಿಸುವ ಅಂತರ ; ಮತ್ತು P  ಜಲ ವ್ಯಾಪ್ಯಶೀಲತೆ ಒಂದು ಗೊತ್ತಾದ ಕಾಲಮಾನದಲ್ಲಿ ನಿರ್ದಿಷ್ಟ ಶಿಲಾಛೇದ ವಿಸ್ತೀರ್ಣದ ಮೂಲಕ ಹರಿಯಬಹುದಾದ ನೀರಿನ ಪ್ರಮಾಣವನ್ನು ವೇಗ ಮತ್ತು ಶಿಲಾಛೇದ ಸೆಲೆಯ ಗುಣಲಬ್ಧದಿಂದ ತಿಳಿಯಬಹುದು. 

   ಅಂತರ್ಜಲಾನ್ವೇಷಣೆ : ವ್ಯವಸಾಯೋದ್ಯಮಗಳಿಗಾಗಿ ಅಂತರ್ಜಲದ ಬೇಡಿಕೆ ಹೆಚ್ಚುತ್ತಲಿದ್ದು ಅದರ ಅನ್ವೇಷಣೆಯ ಅವಶ್ಯಕತೆಯೂ ಹೆಚ್ಚುತ್ತದೆ. ಅನ್ವೇಷಣೆಗಳಲ್ಲಿ ಬಳಕೆಯಲ್ಲಿರುವುದು ಮುಖ್ಯವಾಗಿ ಎರಡು ಕ್ರಮ. ಮೊದಲನೆಯ ಭೂವೈಜ್ಞಾನಿಕ ಕ್ರಮ ಎರಡನೆಯದು ಭೂಭೌತ ಕ್ರಮ. ಅನ್ವೇಷಿಸಬೇಕಾದ ಪ್ರದೇಶದ ಭೂವೈಜ್ಞಾನಿಕ ನಕ್ಷೆಯನ್ನು ತಯಾರಿಸಿ ಇಚ್ಛಿತ ಸ್ಥಳದ ಛೇದ ಚಿತ್ರವನ್ನು ತಯಾರಿಸಿಕೊಂಡು ಮುಂದುವರಿಯುವುದು ಭೂವೈಜ್ಞಾನಿಕ ಕ್ರಮ. ಆಗ ಯಾವ ಯಾವ ಶಿಲಾಸ್ತೋಮಗಳು ಯಾವ ಯಾವ ದಿಕ್ಕಿನಲ್ಲಿ ಓಡುತ್ತವೆ ಅವುಗಳ ಸ್ವರೂಪ ಎಂತಹುದು ಎಂದು ತಿಳಿಯಬಹುದು ಮತ್ತು ಆಯಾ ಪ್ರದೇಶಗಳ ಸುತ್ತಮುತ್ತಲಿನ ಬಾವಿಗಳಲ್ಲಿ ರೇಚನಾಪರೀಕ್ಷೆಗಳನ್ನು ನಡೆಸಿದಾಗ ಆ ಶಿಲೆಗಳು ಶೇಖರಿಸಿ ನೀಡಬಹುದಾದ ಜಲಪ್ರಮಾಣವನ್ನು ತಿಳಿಯಬಹುದು. ಭೂಭೌತ ಕ್ರಮದಲ್ಲಿ ಅನೇಕ ವಿಧವಾದ ಸಲಕರಣೆಗಳು ಬಳಕೆಯಲ್ಲಿವೆ. ಅವುಗಳಲ್ಲಿ ಮುಖ್ಯವಾದುವು ವಿದ್ಯುನ್ನಿರೋಧಮಾಪಕ ಮತ್ತು ಭೂಕಂಪಮಾಪಕ. ವಿದ್ಯುನ್ನಿರೋಧಮಾಪಕ ಆಯಾ ಪ್ರದೇಶದ ನೆಲದಲ್ಲಿ ಎಲೆಕ್ಟ್ರೋಡುಗಳನ್ನು ನೆಟ್ಟು ವಿದ್ಯುತ್ತನ್ನು ಪ್ರವಹಿಸಿದಾಗ ಅಲ್ಲಿನ ಶಿಲೆಗಳ ವಿದ್ಯುನ್ನಿರೋಧತೆಯನ್ನು ತಿಳಿಸುತ್ತದೆ. ಜಲಭರಿತ ಶಿಲೆಗಳು ಮತ್ತು ಜಲರಹಿತಶಿಲೆಗಳು ಅವಕ್ಕೆ ತಕ್ಕ ನಿರೋಧತೆಯನ್ನು ಸೂಚಿಸುವುದರಿಂದ ನಿವೇಶನದ ಗುರುತಿಸುವಿಕೆ ಸುಲಭವಾಗುತ್ತದೆ. ಭೂಕಂಪಮಾಪಕದಲ್ಲಿ ಅಪೇಕ್ಷಿತ ಸ್ಥಳದ ನೆಲದಾಳದಲ್ಲಿ ಕೃತಕವಾಗಿ ಸ್ಫೋಟ ಉಂಟು ಮಾಡಿದಾಗ ಶಬ್ಧದ ಅಲೆಗಳು ಆಯಾ ಶಿಲಾಸ್ತೋಮಗಳಲ್ಲಿ ಅವುಗಳ ಭೌತಿಕ ಗುಣಕ್ಕೆ ತಕ್ಕಂತೆ ವೇಗ ವ್ಯತ್ಯಾಸಗೊಂಡು ಪ್ರವಹಿಸುತ್ತವೆ. ಇಲ್ಲಿ ಉಂಟಾಗುವ ವ್ಯತ್ಯಾಸ ವೈಪರೀತ್ಯಗಳು ಅಪೇಕ್ಷಿತ ನಿವೇಶನವನ್ನು ಸೂಚಿಸುತ್ತವೆ.
(ವೈ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ